ಕನ್ಯಾಶ್ರೀ : ಬೆಸಿಡಿಯೋಮೈಸೀಟೀಸ್ ವರ್ಗ, ಹೋಮೋಬೆಸಿಡಿಯೋ ಮೈಸೀಟೀಸ್ ಉಪವರ್ಗ, ಫೆಲೇಲೀಸ್ ಗಣಕ್ಕೆ ಸೇರಿದ ಹಲವಾರು ಜಾತಿಯ ಶಿಲೀಂಧ್ರಗಳಿಗೆ ಇರುವ ಸಾಮಾನ್ಯ ಹೆಸರು. ಇವುಗಳ ಫಲೋತ್ಪಾದಕಾಂಗಗಳು (ಪ್ರಕ್ಟಿಫಿಕೇಶನ್ಸ್‌) ಬಹಳ ಕೆಟ್ಟ ವಾಸನೆ ಬೀರುವುದರಿಂದ ಇವನ್ನು ಇಂಗ್ಲಿಷಿನಲ್ಲಿ ಸ್ಟಿಂಕ್ ಹಾನ್ರ್ಸ್‌ ಎನ್ನುತ್ತಾರೆ. ಪುತಿಜನ್ಯ ಸಸ್ಯಗಳಾದ ಇವು ಸಾವಯವ ಯುಕ್ತವಾದ ಮಣ್ಣು, ಕೊಳೆಯುತ್ತಿರುವ ಮರ ಮತ್ತು ಸಗಣಿ ಗುಪ್ಪೆಗಳ ಮೇಲೆ ಬೆಳೆಯುತ್ತವೆ.

ಇವುಗಳ ದೇಹ ಬಿಳಿಯ, ಹಳದಿ ಬಣ್ಣದ ಅಥವಾ ಕಿತ್ತಳೆ ಬಣ್ಣದ ಸೂಕ್ಷ್ಮ ಎಳೆಗಳಿಂದ ಕೂಡಿದ ಕವಕಜಾಲವಾಗಿದೆ (ಮೈಸೀಲಿಯ). ಇದರಲ್ಲಿ ಪ್ರೈಮರಿ ಸೆಕೆಂಡರಿ ಮತ್ತು ಟರ್ಶಿಯರಿ ಎಂಬ ಮೂರು ಅವಸ್ಥೆಗಳನ್ನು ಗುರುತಿಸಬಹುದು. ಸಾಧಾರಣವಾಗಿ ಕವಕ ಜಾಲ ಮಣ್ಣಿನಲ್ಲಿ ಹುದುಗಿಕೊಂಡು ಕವಲೊಡೆದು ಬೆಳೆಯುತ್ತದೆ. ಸಂತಾನಾಭಿವೃದ್ದಿಯ ಕಾಲದಲ್ಲಿ ಸಸ್ಯ ದೇಹದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕೋಳಿಮೊಟ್ಟೆ ಯಾಕಾರದ ಬಿಳಿಯ ಬಣ್ಣದ ರಚನೆಗಳು ಬೆಳೆಯ ತೊಡಗುತ್ತವೆ. ಇವುಗಳೊಳಗೆ ವಿಶಿಷ್ಟ ಬಗೆಯ ಬೆಸಿಡಿಯಗಳೆಂಬ ಸಣ್ಣ ಚೀಲಗಳು ಇವೆ. ಇವುಗಳಿಂದ ಬೆಸೆಡಿಯೋಸ್ಟೋರುಗಳೆಂಬ ಬೀಜಾಣುಗಳು ಉತ್ಪತ್ತಿಯಾಗುತ್ತವೆ. ಮೊದಮೊದಲು ಬೆಸೆಡಿಯಗಳ ಸುತ್ತ ಒಂದು ಬಗೆಯ ಆವೃತಕೋಶ (ಪೆರಿಡಿಯಮ್) ಇರುತ್ತದೆ. ಕ್ರಮೇಣ ಅವು ಬಲಿತಂತೆ ಆವೃತಕೋಶ ಬಿರಿದು ಸ್ಥಂಭಾಕೃತಿಯ ಸ್ಪಂಜಿನಂಥ ಫಲೋತ್ಪಾದಕಾಂಗಗಳು ಹೊರಬರುತ್ತವೆ. ಇವುಗಳಲ್ಲಿ ತುದಿಯಲ್ಲಿರುವ ಪೈಲಿಯಸ್ ಎಂಬ ಟೋಪಿಯಂಥ ಭಾಗವನ್ನೂ ಸ್ಟೈಪ್ ಎಂಬ ಉದ್ದವಾದ ತೊಟ್ಟಿನ ಭಾಗವನ್ನೂ ಕಾಣಬಹುದು. ಬುಡದಲ್ಲಿ ಬೀರಿದ ಆವೃತಕೋಶ ಒಂದು ರೀತಿಯ ಪೊರೆಯಂತೆ ಸುತ್ತಿಕೊಂಡಿದೆ. ಪೈಲಿಯಸ್ ಭಾಗ ಬೇರೆ ಬೇರೆ ಕನ್ಯಾಶ್ರೀಗಳಲ್ಲಿ ಬೇರೆ ಬೇರೆ ಆಕಾರದ್ದಾಗಿರುತ್ತದೆ.’ ಪೈಲಿಯಸ್ ಭಾಗದ ಒಳಗಡೆ ಗ್ಲೀಬ ಎಂಬ ಫಲವತ್ತಾದ ವಲಯವಿದೆ. ಇದರಲ್ಲೇ ಬೆಸಿಡಿಯಗಳು ಇರುವುದು. ಬೆಸಿಡಿಯಗಳು ಬಲಿತು ಬೀಜಾಣುಗಳನ್ನು ಉತ್ಪಾದಿಸುತ್ತವೆ. ಕ್ರಮೇಣ ಗ್ಲೀಬ ಕರಗಿಹೋಗಿ ಬೀಜಾಣುಗಳು ಹೊರಬರುತ್ತವೆ. ಜಿಗುಟಾಗಿ ಹಸಿರು ಬಣ್ಣಕ್ಕಿರುವ ಇವು ಸಿಹಿಯಾಗಿದೆ. ಇವು ಹೊರಬರುವ ಕಾಲದಲ್ಲಿ ಒಂದು ಬಗೆಯ ದುರ್ವಾಸನೆಯೂ ಹೊರಡುತ್ತಿದ್ದು ಕೀಟಗಳನ್ನು ಆಕರ್ಷಿಸುತ್ತದೆ. ಕೀಟಗಳು ಪೈಲಿಯಸ್ ಭಾಗದ ಮೇಲೆ ಕುಳಿತಾಗ ಅವಕ್ಕೆ ಬೀಜಾಣುಗಳು; ಅಂಟಿಕೊಳ್ಳುತ್ತವೆ. ಈ ರೀತಿ ಬೀಜಾಣುಗಳ ಪ್ರಸಾರ ನಡೆಯುತ್ತದೆ.
ಕನ್ಯಾಶ್ರೀಗಳಲ್ಲಿ ಅನೇಕ ಜಾತಿಗಳಿವೆ. ಅವುಗಳಲ್ಲಿ ಫ್ಯಾಲಸ್ ಇಂಪ್ಯುಡಿಕಸ್, ಕ್ಲಾತ್ರಸ್, ಡಿಕ್ಟಿಯೋಫೋರ ಮುಂತಾದುವು ಮುಖ್ಯವಾದುವು.	(ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ